Home Shivamogga News ಶಿವಮೊಗ್ಗ: ನವುಲೆ ಕ್ರೀಡಾಂಗಣದಲ್ಲಿ ಫೆಬ್ರುವರಿ 1ರಿಂದ ಕರ್ನಾಟಕ–ಪಂಜಾಬ್ ರಣಜಿ ಪಂದ್ಯ
Shivamogga News

ಶಿವಮೊಗ್ಗ: ನವುಲೆ ಕ್ರೀಡಾಂಗಣದಲ್ಲಿ ಫೆಬ್ರುವರಿ 1ರಿಂದ ಕರ್ನಾಟಕ–ಪಂಜಾಬ್ ರಣಜಿ ಪಂದ್ಯ

Share
Share

ಶಿವಮೊಗ್ಗ: 2027ರ ರಣಜಿ ಟ್ರೋಫಿ ಪಂದ್ಯಾವಳಿಯ ಕರ್ನಾಟಕ–ಪಂಜಾಬ್ ನಡುವಿನ ಪಂದ್ಯವು ಫೆಬ್ರುವರಿ 1ರಿಂದ ನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನವುಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ನಿರ್ದೇಶಕರೂ ಆದ ಡಿ.ಎಸ್. ಅರುಣ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಣಜಿ ಟ್ರೋಫಿ ಪಂದ್ಯ ಆಯೋಜನೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ನವುಲೆ ಕ್ರೀಡಾಂಗಣದಲ್ಲಿ ಆಧುನಿಕ ಫ್ಲಡ್‌ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ ಎಂದರು.

ಫ್ಲಡ್‌ಲೈಟ್ ವ್ಯವಸ್ಥೆಯಿಂದ ರಾತ್ರಿ ವೇಳೆಯಲ್ಲಿಯೂ ಕ್ರಿಕೆಟ್ ತರಬೇತಿ ಹಾಗೂ ಪಂದ್ಯಗಳನ್ನು ಆಯೋಜಿಸಲು ಅನುಕೂಲವಾಗಲಿದೆ. 2027ರೊಳಗೆ ವ್ಯವಸ್ಥೆ ಕಲ್ಪಿಸಿದಲ್ಲಿ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಶಿವಮೊಗ್ಗದಲ್ಲೇ ಆಯೋಜಿಸುವ ಚಿಂತನೆ ಇದೆ ಎಂದು ಹೇಳಿದರು.

2026ರ ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಶಿವಮೊಗ್ಗ ಯೋಧಾಸ್ ತಂಡವು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದೆ. ಶಿವಮೊಗ್ಗದಲ್ಲಿ ಕ್ರಿಕೆಟ್‌ಗೆ ಉತ್ತಮ ಸ್ಪಂದನೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ಅಗತ್ಯ ಆಧುನಿಕ ಮೂಲಸೌಕರ್ಯ ಕಲ್ಪಿಸಿ ಕ್ರಿಕೆಟ್ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದರು.

ನಾಗೇಂದ್ರ ಪಂಡಿತ್, ಸುಕುಮಾರ್ ಪಟೇಲ್, ಶೈಲೇಶ್ ಕುಮಾರ್, ಸುಬ್ರಹ್ಮಣ್ಯ, ಸಂಜಯ್ ಕುಮಾರ್, ಕಿರಣ್, ಯಶವಂತ್ ನಾಯ್ಕ್, ಆರ್.ಪಿ. ನಾಗರಾಜ ಇದ್ದರು.

ನಾಳೆ ಕೆಎಸ್‌ಸಿಎ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ: ಡಿ.ಎಸ್. ಅರುಣ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ನಗರದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿಗೆ ಸೆ. 29ರಂದು ಸಂಜೆ 5 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಎಸ್‌ಸಿಎ ನಿರ್ದೇಶಕರೂ ಆದ ಡಿ.ಎಸ್. ಅರುಣ್ ತಿಳಿಸಿದರು.

ಮಲೆನಾಡಿನಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ವಿವಿಧ ವಯೋಮಾನದ ಕ್ರಿಕೆಟಿಗರಿಗೆ ನಿರಂತರ ಅಭ್ಯಾಸ ನಡೆಸಲು ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳ ಬೇಡಿಕೆಯಂತೆ ಶಿವಮೊಗ್ಗದಲ್ಲಿ ಸುಸಜ್ಜಿತ ಒಳಾಂಗಣ ಅಭ್ಯಾಸ ವ್ಯವಸ್ಥೆ ನಿರ್ಮಿಸಲಾಗುತ್ತಿದೆ ಎಂದರು.

ಒಳಾಂಗಣ ಕ್ರೀಡಾಂಗಣಕ್ಕೆ ₹4.90 ಕೋಟಿ ವೆಚ್ಚವಾಗಲಿದ್ದು, ಹೊರಾಂಗಣ ಮೈದಾನದಲ್ಲಿ ಆಡುವ ಅನುಭವ ನೀಡುವ ರೀತಿಯಲ್ಲಿ ಒಳಾಂಗಣ ಟರ್ಫ್ ವ್ಯವಸ್ಥೆ ಹಾಗೂ ನಾಲ್ಕು ಪಿಚ್‌ಗಳನ್ನು ನಿರ್ಮಿಸಲಾಗುವುದು. ಆಟಗಾರರಿಗೆ ಜಿಮ್ ಸೇರಿದಂತೆ ಅಗತ್ಯ ತರಬೇತಿ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ಹೇಳಿದರು.

ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್, ಖಜಾಂಚಿ ಬಿ.ಎನ್. ಮಧುಕರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು. ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ವ್ಯವಸ್ಥಾಪನಾ ಸಮಿತಿ ಸದಸ್ಯ ಹಾಗೂ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್. ಅರುಣ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕ್ರಿಕೆಟ್ ಕ್ಲಬ್‌ಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

₹5.80 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ: ಕೆಎಸ್‌ಸಿಎ ಮೈದಾನದ ಸಮೀಪದ ಕೆರೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು ₹5.80 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂದಿನ ಹಂತದ ಅನುಮೋದನೆಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ (ಡಿಎಂಎ) ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗವನ್ನು ಕ್ರಿಕೆಟ್ ಹಬ್ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮೂಲಸೌಕರ್ಯ, ಪಂದ್ಯಾವಳಿ ಹಾಗೂ ತರಬೇತಿ ವ್ಯವಸ್ಥೆಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ಗೋವಾದ ಮಾಜಿ ಕ್ರಿಕೆಟಿಗರು ಶಿವಮೊಗ್ಗಕ್ಕೆ ಬಂದು ಪಂದ್ಯಗಳನ್ನು ಆಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಇಲ್ಲಿಗೆ ಬಂದು ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ ಎಂದು ಹೇಳಿದರು.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *