ಮೈಸೂರು ದಸರಾ ಬಳಿಕ ರಾಜ್ಯದಲ್ಲಿ ವೈಭವದ ನಾಡಹಬ್ಬವಾಗಿ ಗುರುತಿಸಿಕೊಂಡಿರುವ ಶಿವಮೊಗ್ಗ ದಸರಾ ಈ ಬಾರಿ ಸಾಂಸ್ಕೃತಿಕ ಸಂಭ್ರಮಕ್ಕಿಂತ ರಾಜಕೀಯ ವಿವಾದದಿಂದಲೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯ ಗಾಯನದ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಿಂದ ಹೊರನಡೆದರೆ, ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ತಿರುಗೇಟು ವಿವಾದಕ್ಕೆ ಮತ್ತಷ್ಟು ರಾಜಕೀಯ ಬಣ್ಣ ನೀಡಿದೆ. ಜನರನ್ನು ಬೆಸೆಯಬೇಕಾದ ನಾಡಹಬ್ಬದ ವೇದಿಕೆಯಲ್ಲೇ ನಡೆದ ಈ ಸಂಘರ್ಷ ದಸರಾ ಸಂಭ್ರಮಕ್ಕೆ ಕಪ್ಪುಚುಕ್ಕೆಯಾಗಿದೆ.
ವಂದೇ ಮಾತರಂ ಗೀತೆಯ ಪೂರ್ಣ ಗಾಯನದ ವಿಚಾರವಾಗಿ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಸರ್ಕಾರದ ಸುತ್ತೋಲೆಯ ಪ್ರಕಾರ ಎರಡು ಚರಣಗಳಿಗೆ ಮಾತ್ರ ಅವಕಾಶವಿದ್ದರೂ ಪೂರ್ಣ ಗೀತೆ ಹಾಡಿಸಲಾಗಿದೆ ಎಂಬುದು ಕಾಂಗ್ರೆಸ್‌ನ ಆರೋಪ. ದಸರಾ ಉಸ್ತುವಾರಿ ವಹಿಸಿರುವ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರನ್ನು ವರ್ಗಾವಣೆ ಮಾಡಬೇಕೆಂಬ ಆಗ್ರಹವನ್ನೂ ಮುಂದಿಟ್ಟಿದ್ದಾರೆ.
ಆದರೆ, ಸರ್ಕಾರದ ನಿಯಮಾವಳಿ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ಎರಡು ಚರಣಗಳ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂಬುದು ಆಯುಕ್ತರ ಸ್ಪಷ್ಟನೆ. ವೇದಿಕೆಯಲ್ಲಿದ್ದ ಗಣ್ಯರು ಮತ್ತು ಸಭಿಕರು ಸ್ವಯಂಪ್ರೇರಿತರಾಗಿ ಮುಂದಿನ ಚರಣಗಳನ್ನು ಹಾಡಿದ್ದರಿಂದ ಗೊಂದಲ ಉಂಟಾಯಿತು ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ವಂದೇ ಮಾತರಂ ಪೂರ್ಣವಾಗಿ ಹಾಡಿದ ಕಾರಣಕ್ಕೆ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ವಿರೋಧಿಸಿದ್ದಾರೆ. ದೇಶಭಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ.
ಸರ್ಕಾರದ ಸುತ್ತೋಲೆಯ ಪಾಲನೆ ಕುರಿತು ಆಕ್ಷೇಪವಿದ್ದರೆ ಅದನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬಹುದಿತ್ತು. ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಆಡಳಿತದ ಜವಾಬ್ದಾರಿ. ಆದರೆ, ವೇದಿಕೆಯಲ್ಲೇ ವಾಗ್ವಾದ ನಡೆಸುವುದು, ಕಾರ್ಯಕ್ರಮ ಬಹಿಷ್ಕರಿಸುವುದು ಮತ್ತು ಅಧಿಕಾರಿಯ ವರ್ಗಾವಣೆಗೆ ಆಗ್ರಹಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದೇ ರೀತಿ, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗೊಂದಲಕ್ಕೆ ಅವಕಾಶವಾಗದಂತೆ ಆಯೋಜಕರು ಮುಂಚಿತವಾಗಿ ಸ್ಪಷ್ಟತೆ ನೀಡಬೇಕಿತ್ತು.
ದಸರಾ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ; ಅದು ಜನರ ಹಬ್ಬ. ಧಾರ್ಮಿಕ ಆಚರಣೆಗಳ ಜತೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಸೆಯುವ ಉತ್ಸವದಲ್ಲಿ ರಾಜಕೀಯ ಪ್ರತಿಷ್ಠೆ ಮುನ್ನೆಲೆಗೆ ಬಂದರೆ ಜನರ ಸಂಭ್ರಮ ಮಸುಕಾಗುತ್ತದೆ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸಹಜ ಭಾಗವಾದರೂ ಅವು ನಾಡಹಬ್ಬದ ಗೌರವಕ್ಕೆ ಧಕ್ಕೆ ತರಬಾರದು.
ದಸರಾ ಸಂಭ್ರಮವನ್ನು ಕಾಪಾಡುವುದು ಆಯೋಜಕರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೆಲ್ಲರ ಜವಾಬ್ದಾರಿ. ರಾಜಕೀಯ ಪ್ರತಿಷ್ಠೆಗಿಂತ ನಗರದ ಗೌರವ, ಆರೋಪ–ಪ್ರತ್ಯಾರೋಪಗಳಿಗಿಂತ ಸಂವಾದ ಮತ್ತು ಸಂಘರ್ಷಕ್ಕಿಂತ ಸೌಹಾರ್ದಕ್ಕೆ ಆದ್ಯತೆ ಸಿಗಲಿ. ಶಿವಮೊಗ್ಗದ ದಸರಾ ವೈಭವಕ್ಕೆ ರಾಜಕೀಯದ ಗ್ರಹಣ ಹಿಡಿಯದಿರಲಿ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment