ಶಿವಮೊಗ್ಗ: 1985ರಲ್ಲಿ ಶಿವಮೊಗ್ಗದಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಲಾಗಿತ್ತು. ಮಧ್ಯ ಕರ್ನಾಟಕದ ಜನರಿಗೆ ನ್ಯಾಯಾಂಗ ಸೇವೆಗಳು ಸುಲಭವಾಗಿ ದೊರೆಯುವಂತೆ ಓಡಿಶಾ ಮಾದರಿ ಶಿವಮೊಗ್ಗದಲ್ಲಿಯೇ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಹಿರಿಯ ವಕೀಲ ಕೆ. ಬಸಪ್ಪ ಗೌಡ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರ ಅನುಕೂಲವನ್ನು ಪರಿಗಣಿಸಿ ಶಿವಮೊಗ್ಗದಲ್ಲಿಯೇ ಪೀಠ ಸ್ಥಾಪಿಸಬೇಕು ಎಂದರು.
ಓಡಿಶಾ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ನ್ಯಾಯಾಂಗ ಸೇವೆಗಳನ್ನು ಸುಲಭವಾಗಿ ಪಡೆಯುವ ವ್ಯವಸ್ಥೆ ರೂಪಿಸಬೇಕು. ಜಿಲ್ಲಾ ಮಟ್ಟದಲ್ಲಿ ಅನುಭವಿ ಸಿಬ್ಬಂದಿಯ ನೆರವಿನಿಂದ ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಸುವುದು, ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವುದು ಹಾಗೂ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದರೆ ವಕೀಲರು ಮತ್ತು ಕಕ್ಷಿದಾರರ ಪ್ರಯಾಣದ ಸಮಯ ಹಾಗೂ ವೆಚ್ಚ ಕಡಿಮೆಯಾಗಲಿದೆ ಎಂದು ವಿವರಿಸಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿರುವ ಸಮಿತಿಯು ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಸಮಿತಿಯು ಶಿವಮೊಗ್ಗ ಜಿಲ್ಲೆಗೂ ಭೇಟಿ ನೀಡುವ ಸಾಧ್ಯತೆಯಿದೆ ಎಂದರು.
ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೈಕೋರ್ಟ್ ಪೀಠಕ್ಕೆ ಬೇಡಿಕೆ ವ್ಯಕ್ತವಾಗದಿದ್ದರೂ ಆ ಜಿಲ್ಲೆಗಳನ್ನು ಸಮಿತಿಯ ವ್ಯಾಪ್ತಿಗೆ ಸೇರಿಸಿರುವುದರ ಉದ್ದೇಶವೇನು ಎಂಬ ಪ್ರಶ್ನೆ ಮೂಡಿದೆ. ಎಲ್ಲ ಜಿಲ್ಲೆಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೆಲವು ಜಿಲ್ಲೆಗಳನ್ನು ಕೈಬಿಟ್ಟು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಉದ್ದೇಶವಿರಬಹುದು ಎಂಬ ಅನುಮಾನವಿದೆ ಎಂದು ಹೇಳಿದರು.
ಈಗಾಗಲೇ ಧಾರವಾಡ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಮಧ್ಯ ಕರ್ನಾಟಕದ ಜನರಿಗೂ ನ್ಯಾಯಾಲಯದ ಸೇವೆಗಳು ಸುಲಭವಾಗಿ ದೊರೆಯುವಂತಾಗಲು ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಸಂಚಾರಿ ಪೀಠ ಸ್ಥಾಪಿಸಬೇಕು. ಮಂಗಳೂರಿಗೆ ಪೀಠ ನೀಡುವ ಬದಲು ಮಧ್ಯ ಕರ್ನಾಟಕದ ನ್ಯಾಯಾಂಗ ಸೇವೆಯ ಅಗತ್ಯವನ್ನು ಪರಿಗಣಿಸಿ ಶಿವಮೊಗ್ಗಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಅ. 12ರಿಂದ ಎರಡನೇ ಹಂತದ ಧರಣಿ
ಜಿಲ್ಲಾ ಸಂಚಾರಿ ಪೀಠ ಸಮಿತಿ ಸೇರಿದಂತೆ 49 ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಅ. 12ರಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಎರಡನೇ ಹಂತದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.
‘ಮಧ್ಯ ಕರ್ನಾಟಕದಲ್ಲೇ ಸಂಚಾರಿ ಪೀಠ ಸ್ಥಾಪಿಸಬೇಕು. ಕರಾವಳಿ ಪೀಠಕ್ಕೆ ನಾವು ಹೋಗುವುದಿಲ್ಲ’ ಎಂಬ ಹಕ್ಕೊತ್ತಾಯದೊಂದಿಗೆ ಧರಣಿ ನಡೆಸಲಾಗುವುದು ಎಂದು ಹೇಳಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment