ಶಿವಮೊಗ್ಗ: ಭದ್ರಾ ಜಲಾಶಯದಿಂದ ಜನವರಿ 3 ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 8 ರಿಂದ ಎಡದಂಡೆ ನಾಲೆಗೆ ನಿರಂತರವಾಗಿ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದಿನ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ಅವಶ್ಯಕವಾಗಿರುವ ನೀರನ್ನು ಒದಗಿಸಲು ಮತ್ತು ನಗರ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವುದನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಚ್ಚುಕಟ್ಟು ವ್ಯಾಪ್ತಿಯ ನಾಲೆ, ಕೆರೆಗಳಲ್ಲಿ ತುಂಬಿರುವ ಹೂಳನ್ನು ನರೇಗಾ ಯೋಜನೆಯಡಿ ತೆಗೆಯಿಸಬಹುದಾದರೂ ಪಟ್ಟಣ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿನ ನಾಲೆ, ಕೆರೆಗಳಲ್ಲಿನ ಹೂಳನ್ನು ತೆಗೆಯಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷೆಯಂತೆ ಸಕಾಲದಲ್ಲಿ ಜಲಾಶಯದಿಂದ ಹರಿಸುವ ನೀರು ನಿಗಧಿತ ಗುರಿ ತಲುಪುತ್ತಿಲ್ಲ. ಆದ್ದರಿಂದ ಪ್ರಾಧಿಕಾರದ ನೀರಾವರಿ
ಎಂಜಿನಿಯರ್‌ರವರು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಪ್ರಸ್ತಾವನೆಯನ್ನು ತಯಾರಿಸಿ ಕೂಡಲೇ ಸಲ್ಲಿಸಬೇಕು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಲಾಶಯದ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿನ ಸಾಗುವಳಿದಾರರಿಗೆ ಹಾಗೂ ಹೊಸದಾಗಿ ತೋಟ ಮಾಡಿರುವ ಬೆಳೆಗಾರರಿಗೆ ಇಂದಿನಿಂದಲೇ ನೀರಿನ ಅಗತ್ಯವಿದೆ. ವಿಳಂಬವಾದಲ್ಲಿ ಲಕ್ಷಾಂತರ ಅಡಿಕೆ ಗಿಡಗಳು ನಾಶವಾಗುವ ಸಂಭವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರಿನ ಹರಿವನ್ನು ನಿಯಂತ್ರಿಸಿ, ನೀರನ್ನು ಒದಗಿಸಬಹುದಾದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು. -ಬಸವರಾಜಪ್ಪ, ರೈತ ಮುಖಂಡರು, ಶಿವಮೊಗ್ಗ.
ಗೋಂದಿ ಭಾಗದ ಕಾಲುವೆಗಳು ಎತ್ತರದ ಪ್ರದೇಶದಲ್ಲಿವೆ ಅಲ್ಲದೆ ಆ ಭಾಗದ ಕೆರೆ-ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರಿನ ಹರಿವು ಸಮರ್ಪಕವಾಗಿಲ್ಲದ ಕಾರಣ ಅಚ್ಚುಕಟ್ಟುದಾರರಿಗೆ ನೀರು ತಲುಪದಿರುವ ಬಗ್ಗೆ ಆಕ್ಷೇಪಣೆಗಳಿರುವುದನ್ನು ಗಮನಿಸಲಾಗಿದೆ. ಅಲ್ಲಿನ ಬೆಳೆಗಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸಕಾಲದಲ್ಲಿ ಒದಗಿಸಲು ಭದ್ರಾ ಇಂಜಿನಿಯರ್‌ರವರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಆರ್.ಪ್ರಸನ್ನಕುಮಾರ್, ಅಭಿಯಂತರರಾದ ರವಿಕುಮಾರ್, ರವಿಚಂದ್ರ ಇದ್ದರು.
ರೈತರಭೂಮಿಗೆ ನೀರು ಹರಿಸುವರು ಪ್ರಾಧಿಕಾರದ ಹೊಣೆ: ಅಂಶುಮಂತ್
ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಸಮೀಪದ ಸಾಗುವಳಿದಾರರಿಗೆ ನೀರು ದೊರೆಯುತ್ತಿರುವಂತೆಯೇ ದೂರದ ರೈತರ ಒಣಭೂಮಿಗೆ ನೀರು ಹರಿಸಬೇಕಾಗಿರುವುದು ಪ್ರಾಧಿಕಾರದ ಹೊಣೆಯಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಂಶುಮಂತ್ ತಿಳಿಸಿದರು.
ನೈಸರ್ಗಿಕವಾಗಿ ದೊರೆಯುತ್ತಿರುವ ಅಮೂಲ್ಯ ಜಲವನ್ನು ಮಿತವಾಗಿ ಬಳಸಿಕೊಳ್ಳಬೇಕು. ಮಾನವೀಯ ನೆಲೆಯಲ್ಲಿ ಎಲ್ಲ ರೈತರ ಹಿತಸುಖ ಕಾಯುವ ನಿಟ್ಟಿನಲ್ಲಿ ಚಿಂತಿಸಬೇಕು. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ವ್ಯರ್ಥವಾಗಿ ಹರಿದು ಹೋಗುವಂತಾಗಬಾರದು. ನೀರಿನ ಮಿತಬಳಕೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಇರಬೇಕು. ಪ್ರಾಧಿಕಾರದ ನಿರ್ಣಯಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment