ಶಿವಮೊಗ್ಗ:ʼನಗರದಲ್ಲಿ ಮಹಿಳೆಯರು ಮತ್ತು ಶಾಲಾ- ಕಾಲೇಜು ಮಕ್ಕಳಿಗೆ ತ್ವರಿತ ಸಹಾಯ ಹಾಗೂ ಆತ್ಮವಿಶ್ವಾಸದೊಂದಿಗೆ ಧೈರ್ಯ ತುಂಬುವ ಉದ್ದೇಶದಿಂದ ಅಕ್ಕಪಡೆ ತಂಡ ರಚಿಸಲಾಗಿದೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಬುಧವಾರ ನೂತನ ಅಕ್ಕಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಸುರಕ್ಷಿತರಾಗಿದ್ದರೆ ಜಿಲ್ಲೆ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ಅಕ್ಕ ಪಡೆ ಮಹಿಳೆಯರಿಂದ ಮಹಿಳೆಯರ ರಕ್ಷಣೆಗಾಗಿ ಕಟ್ಟಿರುವ ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟಕ್ಕೂ ಪಡೆಯನ್ನು ವಿಸ್ತರಿಸಲಾಗುವುದು ಎಂದರು.
ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ- ಹರೆಯದ ಹೆಣ್ಣು ಮಕ್ಕಳು ಸೇರಿದಂತೆ ಬಾಲ ಕಾರ್ಮಿಕ ಪದ್ದತಿ, ಭಿಕ್ಷಾಟನೆ, ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ನಗರ ಮತ್ತು ಹೊರವಲಯದ ಬಸ್ ನಿಲ್ದಾಣ, ಮಾರ್ಕೆಟ್, ದೇವಸ್ಥಾನ, ಪಾರ್ಕ್ ಗಳು, ಶಾಲಾ-ಕಾಲೇಜುಗಳ ಬಳಿ, ಲೇಡಿಸ್ ಹಾಸ್ಟೆಲ್, ಜನ ನಿಭಿಡ ಪ್ರದೇಶಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ಕ ಪಡೆ ಗಸ್ತು ನಡೆಸುವುದು ಎಂದರು.
ಅಕ್ಕ ಪಡೆ ರಚನೆಯು ಮಹಿಳಾ ಸಬಲೀಕರಣ ಹಿನ್ನಲೆ ಬಹು ದೊಡ್ಡ ಹೆಜ್ಜೆ. ಮಹಿಳೆ ಸಬಲವಾಗಲು ಸರಿಯಾದ ಶಿಕ್ಷಣ ಅಗತ್ಯವಿದ್ದು, ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವೇಳೆ ಹಾಗೂ ಸಾಮಾಜಿಕ ಜೀವನದಲ್ಲಿ ಆಕೆಗೆ ಸುರಕ್ಷಿತ ವಾತಾವರಣ ಬೇಕು. ಇಂತಹ ವಾತಾವರಣವನ್ನು ಅಕ್ಕ ಪಡೆ ನಿರ್ಮಿಸಲು ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.
ಎಸ್‌ಪಿ ಕಾರಿಯಪ್ಪ, ಕೆಎಸ್‌ಆರ್ ಪಿ ಕಮಾಂಡೆಂಟ್ ಯುವಕುಮಾರ್, ಗೃಹರಕ್ಷಕ ಕಮಾಂಡೆಂಟ್ ಚೇತನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಶಶಿರೇಖಾ, ಡಿಸಿಪಿಓ ಮಂಜುನಾಥ್, ಡಾ.ಸಂತೋಷ್ ಕುಮಾರ್ ಇದ್ದರು.
ಸಹಾಯವಾಣಿ 112, 1098ಗೆ ಕರೆ ಮಾಡಿ
ಜಿಲ್ಲೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಘಟನೆಗಳು ಕಡಿಮೆ ಇದೆ. ಆದರೂ ಜಾಗೃತಿ ಬೇಕು. ಪೋಕ್ಸೋ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ‘ಅಕ್ಕಪಡೆ’ ಸಹಕಾರಿಯಾಗಲಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯ, ಕಿರುಕುಳ, ದೌರ್ಜನ್ಯ ಕುರಿತ ಅಂಜಿಕೆ ಇಲ್ಲದೇ, ಧೈರ್ಯದಿಂದ ಹೇಳಬೇಕು. ಸಹಾಯವಾಣಿ ಸಂಖ್ಯೆ 112 ಮತ್ತು 1098 ಗೆ ಕರೆ ಮಾಡಿ ತಿಳಿಸಬಹುದು. ಹೀಗೆ ಕರೆ ಮಾಡಿದವರ ಮಾಹಿತಿ, ಕರೆ ಮಾಡಿದ ವಿಷಯಗಳನ್ನೆಲ್ಲ ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ತೊಂದರೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಿರಿ. ಹಾಗೂ ನಿರ್ಭಯವಾಗಿ ಅಕ್ಕ ಪಡೆ ಸೌಲಭ್ಯವನ್ನು ಬಳಸಿಕೊಳ್ಳಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.
ಎರಡು ಪಾಳಿಗಳಲ್ಲಿ ಅಕ್ಕ ಪಡೆ ಗಸ್ತು
ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ಸರ್ಕಾರ ನೀಡಿದ್ದು, ಈ ವಾಹನವು ಪಡೆಯೊಂದಿಗೆ ಶಾಲಾ-ಕಾಲೇಜು, ಜನ ನಿಭಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ. ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಮತ್ತು ಸ್ವತಂತ್ರವಾಗಿ ಮಾತನಾಡಿ, ಅಕ್ಕ ಪಡೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಕರೆ ನೀಡಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment