ಬೆಂಗಳೂರು: ʼ ಶಿವಮೊಗ್ಗ ಜಿಲ್ಲೆಯ ತುಂಗಾ, ಭದ್ರಾ ಮತ್ತು ಶರಾವತಿ ನದಿಗಳಿಗೆ ಕಸಾಯಿಖಾನೆಗಳ ತ್ಯಾಜ್ಯ ಹಾಗೂ ಆಸ್ಪತ್ರೆಗಳ ಅಪಾಯಕಾರಿ ವಸ್ತುಗಳನ್ನು ನೇರವಾಗಿ ಹರಿಸಲಾಗುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಎಚ್ಚರಿಸಿದರು.
ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು,ʼ ರಾಜ್ಯದ ಪವಿತ್ರ ನದಿಗಳು ಮತ್ತು ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳು ಕಸದ ತೊಟ್ಟಿಗಳಾಗಿ ಮಾರ್ಪಾಡಾಗುತ್ತಿವೆ. ಆದರೆ, ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸ್ವಚ್ಛ ಭಾರತ ಅಭಿಯಾನಕ್ಕೆ ದಶಕ ಪೂರ್ಣಗೊಂಡಿದ್ದರೂ ಪರಿಸರ ಸ್ಥಿತಿ ಶೋಚನೀಯವಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ದೂರಿದರು.
ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಾದ ಜೋಗ ಮತ್ತು ಆಗುಂಬೆ ವ್ಯಾಪ್ತಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳ ತಾಣವಾಗುತ್ತಿರುವುದು ಕಳವಳಕಾರಿಯಾಗಿದೆ. ಸರ್ಕಾರ ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತಂದು, ನದಿಗಳಿಗೆ ಕಸ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ಕಣ್ಗಾವಲು ಹೆಚ್ಚಿಸಬೇಕು ಹಾಗೂ ಗ್ರಾಮೀಣ ತ್ಯಾಜ್ಯ ನಿರ್ವಹಣೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮಲೆನಾಡು ರಾಜ್ಯದ ಜೀವಾಳವಾಗಿದ್ದು, ಅದರ ಪರಿಸರ ನಾಶವಾದರೆ ಇಡೀ ರಾಜ್ಯಕ್ಕೆ ದುಷ್ಪರಿಣಾಮ ಬೀರುತ್ತದೆ. ಇದು ಪಕ್ಷಾತೀತ ವಿಷಯವಾಗಿದ್ದು, ಮುಂದಿನ ಪೀಳಿಗೆಯ ಬದುಕಿನ ಪ್ರಶ್ನೆ ಎಂದು ಅವರು ಸರ್ಕಾರಕ್ಕೆ ಮನವರಿಕೆ ಮಾಡಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment