ಶಿವಮೊಗ್ಗ: ಸಾಗರ ತಾಲ್ಲೂಕು ತುಮರಿ ಸಮೀಪದ ಸಿಗಂದೂರು ಕ್ಷೇತ್ರದಲ್ಲಿ ಜನವರಿ 14 ಮತ್ತು 15 ರಂದು ಸಂಕ್ರಾಂತಿ ಅಂಗವಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮದರ್ಶಿ ಡಾ.ಎಸ್.ರಾಮಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ತಿಳಿಸಿದ್ದಾರೆ.
ಸಿಗಂದೂರು ಚೌಡೇಶ್ವರಿ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ನಾಡಿನಾದ್ಯಂತ ನೆಲೆಸಿರುವ ದೇವಿಯ ಭಕ್ತರಿಗೆ ದೇವಿಯ ಉತ್ಸವ ಕಣ್ತುಂಬಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಕಾಲ ದೇವಿಯ ಜಾತ್ರೆ ನಡೆಯಲಿದ್ದು, ಧಾರ್ಮಿಕ ವಿಧಿವಿದಾನಗಳೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾನಪದ ಕಲಾ ತಂಡಗಳ ಪ್ರದರ್ಶನ ಇರಲಿದ್ದು, ಜನವರಿ 14 ರಂದು ಬೆಳಿಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ, 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಕ್ಕೆ 8.30 ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ ಮಾಡಲಿದೆ. 12.30 ಗಂಟೆಗೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ. 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ, ಸಂಜೆ 5 ಗಂಟೆಗೆ ಗುರುಪೂಜೆ ನೆರವೇರಲಿದ್ದು, 6 ಗಂಟೆಗೆ ಗಂಗಾರಥಿ ಇರಲಿದೆ ಎಂದು ತಿಳಿಸಿದ್ದಾರೆ.
ಶಿವದೂತ ಗುಳಿಗ ನಾಟಕ ಪ್ರದರ್ಶನ
ಜ. 14 ರಂದು ಸಂಜೆ 7 ಗಂಟೆಯಿಂದ ಭಕ್ತ ಪ್ರಿಯ ನಾಟಕ ಶಿವದೂತ ಗುಳಿಗ ನಾಟಕ ಪ್ರದರ್ಶನವಿದೆ. ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿರುವ ಈ ನಾಟಕ ಪ್ರದರ್ಶನ ಮುಗಿದ ಬಳಿಕ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಮತ್ತು ಎದೆತುಂಬಿ ಹಾಡಿದೆನು ಸೇರಿದಂತೆ ವಿವಿಧ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಹಲವು ಕಲಾವಿದರ ಕಂಠ ಸಿರಿಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.
ಪಲ್ಲಕ್ಕಿ ಉತ್ಸವ, ಜ್ಯೋತಿ ಮೆರವಣಿಗೆ
ಜ.14ರಂದು ಬೆಳಗ್ಗೆ 5.30 ಗಂಟೆಗೆ ದೇವಿಯ ಮೂಲ ಸ್ಥಳದಲ್ಲಿ ಪುಣ್ಯಾಹ ಶುದ್ದಿ, 6 ಗಂಟೆಗೆ ನವಚಂಡಿಕಾ ಹೋಮ ಪ್ರಾರಂಭವಾಗಲಿದೆ. 8.30 ಗಂಟೆಗೆ ಹೋಮ ಪೂರ್ಣಾಹುತಿ, 9 ಗಂಟೆಗೆ ಮಹಾಭಿಷೇಕ, ಹೂವಿನ ಮತ್ತು ಆಭರಣ ಅಲಂಕಾರ ಮಹಾಪೂಜೆ ನಡೆಯಲಿದ್ದು, 10.30 ರಿಂದ ಪಲ್ಲಕ್ಕಿ ಉತ್ಸವ ಮತ್ತು ಜ್ಯೋತಿ ಮೆರವಣಿಗೆ ಆರಂಭವಾಗುವುದು.
ಜ.15ರಂದು ಯಕ್ಷಗಾನ ಪ್ರದರ್ಶನ
ಜನವರಿ 15 ರಂದು ಮುಂಜಾನೆಯಿಂದ ಮಹಾಭಿಷೇಕ, ಅಲಂಕಾರ, ಮಹಾಪೂಜೆ ಗುರುಪೂಜೆ, ದೇವಿ ಪಾರಾಯಣಗಳು ನಡೆಯದ್ದು, 8 ಗಂಟೆಗೆ ನವಚಂಡಿಕಾ ಹೋಮ ಹಾಗೂ ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ, ರಂಗಪೂಜೆ ಬಳಿಕ ಸಂಜೆ 6 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. 7 ಗಂಟೆಯಿಂದ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದಿಂದ ಶ್ರೀ ದೇವಿಲಲಿತೋಪಖ್ಯಾನ ಎಂಬ ಯಕ್ಷಗಾನ ಪ್ರದರ್ಶನವಿದೆ ಇರಲಿದೆ ಎಂದು ತಿಳಿಸಿದ್ದಾರೆ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment