ಶಿವಮೊಗ್ಗ: ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ದಿನ ನಿತ್ಯ ಬಳಕೆಯ ಘನ ತ್ಯಾಜ್ಯವನ್ನು (ಕಸ) ಸುರಿಯಲಾಗುತ್ತಿದೆ. ಇದರಿಂದ, ನಗರದ ಹೊರ ವಲಯ ಕಸ ಸುರಿಯುವ ತೊಟ್ಟಿಯಂತಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.
ನಗರೀಕರಣದ ವೇಗ ಮತ್ತು ತ್ಯಾಜ್ಯ ನಿರ್ವಹಣೆಯ (Solid Waste Management) ದುರ್ಬಲ ವ್ಯವಸ್ಥೆಯಿಂದಾಗಿ ನಗರ ವ್ಯಾಪ್ತಿಯ ತ್ಯಾಜ್ಯವು ಪರಿಸರದ ಒಡಲು ಸೇರುತ್ತಿದೆ. ಇದು ಜೀವ ಸಂಕುಲ ಸೇರಿದಂತೆ ಪರಿಸರ ಸಮತೋಲನಕ್ಕೂ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಘನ ತ್ಯಾಜ್ಯ ನಿರ್ವಹಣೆಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಕಲ್ಪಿಸಿದ್ದರೂ ಸಹ ಸಾರ್ವಜನಿಕರು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುತ್ತಿಲ್ಲ. ಕೆಲವು ಅಂಗಡಿ ಮುಗ್ಗಟ್ಟುಗಳು, ಮದ್ಯದ ಅಂಗಡಿಗಳು ಸೇರಿದಂತೆ ಆಸ್ಪತ್ರೆ ತ್ಯಾಜ್ಯವನ್ನೂ ಸಹ ರಸ್ತೆಯ ಇಕ್ಕೆಲಗಳಲ್ಲಿ ಸುರಿಯಲಾಗುತ್ತಿದೆ.
ಸಾಗರ ರಸ್ತೆ, ತೀರ್ಥಹಳ್ಳಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತ್ಯಾಜ್ಯವನ್ನು ಸುರಿಯಲಾಗಿದೆ. ಇದರಿಂದ, ಅರಣ್ಯ ಸಂಪತ್ತು, ಜಲಮೂಲ ಸೇರಿದಂತೆ ಜಲಚರಗಳಿಗೆ ಉರುಳಾಗಿದೆ. ಸಾಗರ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ಹತ್ತಾರು ಟನ್ ಗೃಹ ಬಳಕೆಯ ತ್ಯಾಜ್ಯ ಸುರಿಯಲಾಗಿದ್ದು, ಇದು ಬೀದಿ ನಾಯಿಗಳು, ಜಾನುವಾರು ಸೇರಿದಂತೆ ಕಾಡು ಪ್ರಾಣಿಗಳ ಜೀವಕ್ಕೆ ಮಾರಕವಾಗಿದೆ.
ರಾತ್ರಿ ವೇಳೆಯಲ್ಲಿ ಕೆ ಲವು ಕಿಡಿಗೇಡಿಗಳು ಕಸ ತಂದು ಸುರಿಯುತ್ತಿದ್ದು, ಸಮೀಪದ ಹುಲಿ ಮತ್ತು ಸಿಂಹಧಾಮ ಸಮೀಪ, ಆಯನೂರು, ತೀರ್ಥಹಳ್ಳಿ ರಸ್ತೆ, ಭದ್ರಾವತಿ ರಸ್ತೆ ಸೇರಿದಂತೆ ಸ್ಥಳೀಯ ಅರಣ್ಯ ವ್ಯಾಪ್ತಿಯ ಸುತ್ತಮುತ್ತ ಕಸದ ರಾಶಿ ಕಾಣ ಸಿಗುತ್ತದೆ. ತ್ಯಾಜ್ಯದಲ್ಲಿರುವ ವಿಷಕಾರಿ ರಾಸಾಯನಿಕಗಳು ಮಳೆಗಾಲದಲ್ಲಿ ಹರಿದು ನದಿ, ಹಳ್ಳ-ಕೊಳ್ಳ ಮತ್ತು ಜಲಾಶಯಗಳಿಗೆ ಸೇರುತ್ತಿವೆ. ಇದರ ಪರಿಣಾಮದಿಂದ ಜಲಚರ ಜೀವಿಗಳ ಸಾವಿನ ಪ್ರಮಾಣವೂ ಹೆಚ್ಚಳವಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರಾಸಕ್ತರ ಒತ್ತಾಯ.
ʼಸೂಕ್ಷ್ಮ ಜೀವ ಸಂಕುಲಕ್ಕೆ ಕಂಟಕʼ
ʼರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸ ಸುರಿಯುವುದರಿಂದ ಅರಣ್ಯ ಭೂಮಿಯ ಜೈವಿಕ ಸಮತೋಲನ ಹದಗೆಡುತ್ತದೆ. ಪ್ಲಾಸ್ಟಿಕ್ ಬ್ಯಾಗ್, ಗಾಜಿನ ತುಂಡು, ರಬ್ಬರ್, ಬಟ್ಟೆ ಹಾಗೂ ಬಳಸಿದ ರಾಸಾಯನಿಕ ಡಬ್ಬೆಗಳು ಮಣ್ಣಿನ ರಾಸಾಯನಿಕ ಗುಣ ಕೆಡಿಸುತ್ತಿದೆ. ಈ ರೀತಿಯ ತ್ಯಾಜ್ಯವು ಕಾಡಿನ ಸೂಕ್ಷ್ಮ ಜೀವಸಂಕುಲಕ್ಕೆ ಅಪಾಯ. ಕೆಲವು ಪ್ರಾಣಿಗಳು ತ್ಯಾಜ್ಯವನ್ನು ಆಹಾರವೆಂದು ಸೇವಿಸುತ್ತವೆ. ಇದರಿಂದ, ಜೀವಕ್ಕೂ ಕುತ್ತು. ಆದ್ದರಿಂದ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕುʼ ಎಂದು ತಾವರೆಕೊಪ್ಪ ಗ್ರಾಮಸ್ಥರ ಒತ್ತಾಯ.
ʼ

‘ಅಬ್ಬಲಗೆರೆಯ ಪರಿಸರ ಕಾಪಾಡಿ’
ತಾಲ್ಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಯ ಆವರಣದಲ್ಲಿ ನಗರ ನಿವಾಸಿಗಳು ಬಳಸಿದ ವಸ್ತುಗಳು ಸೇರಿದಂತೆ ಮದುವೆ ಮನೆಯಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯವನ್ನು ಸರಿಯಲಾಗಿದೆ. ಇಲ್ಲಿನ ಗ್ರಾಮಾಂತರ ಪ್ರದೇಶದ ಜಾನುವಾರುಗಳು ಆಹಾರ ಅರಸಿ, ಇದೇ ಕಸವನ್ನು ಸೇವಿಸುತ್ತಿವೆ. ಇದರಿಂದ, ಪ್ರಾಣಿ ಸಂಕುಲಗಳ ಮೇಲೆ ಪರಿಣಾಮ ಬಿರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹ.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment