ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷದಂತೆ, 21 ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ 8 ರಂದು ಶರಾವತಿ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕವಯತ್ರಿ ಜೆ. ಹಂಸಿಕಾ ಆಯ್ಕೆಯಾಗಿದ್ದು, ಜಾವಳ್ಳಿಯ ಜ್ಞಾನದೀಪ ಶಾಲಾ ವಿದ್ಯಾರ್ಥಿ ಕವಿ ಪಿ. ಬಿ. ಶ್ರೀಕಾಂತ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದು, ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗಮಿಸಲಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಭದ್ರಾವತಿಯ ಸುಧಾಮಣಿ ವೆಂಕಟೇಶ್, ಸೊರಬದ ಶಂಕರ್ ಶೇಟ್, ಸಾಗರದ ಸದಾನಂದ ಶರ್ಮ, ತೀರ್ಥಹಳ್ಳಿಯ ರೇಣುಕಾ ಹೆಗಡೆ, ಶಿಕಾರಿಪುರದ ಕೆ. ಎಸ್. ಹುಚ್ಚರಾಯಪ್ಪ, ಎಸ್. ಎನ್. ನರಸಿಂಹ ಸ್ವಾಮಿ, ಹೊಸನಗರದ ರಾಘವೇಂದ್ರ ನಗರ ಅವರು ಭಾಗವಹಿಸಲಿದ್ದಾರೆ.
ಶಿಕಾರಿಪುರ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿತ್ತಲ ಕೆ.ಪಿ.ಎಸ್. ಕಾಲೇಜು ವಿದ್ಯಾರ್ಥಿನಿ ಬಿ.ಎಲ್. ರುಕ್ಮಿಣಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಥಾಗೋಷ್ಠಿಯಲ್ಲಿ ಸೊರಬ ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹರೀಶಿ, ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕಥೆಗಾರ್ತಿ ಸಿ. ಕವಿತಾ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಬಂಧಗೋಷ್ಠಿಯಲ್ಲಿ ಸಾಗರ ತಾಲೂಕು ಸಮ್ಮೇಳನ ಉದ್ಘಾಟಕರಾದ ಸಿರಿವಂತೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸಾಹಿತ್ಯ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಕಿಂದರಜೋಗಿ ನಾಟಕ ಪ್ರದರ್ಶನ
ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯ್ಕೆಯಾಗುವ ಮಕ್ಕಳು, ಮಂಡ್ಯದ ಆದಿಚುಂಚನಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನೂರು ವರ್ಷ ಸಂದಿರುವ, ರಾಷ್ಟ್ರಕವಿ ಕುವೆಂಪು ಅವರು ಬರೆದ ಬೊಮ್ಮನಹಳ್ಳಿ ಕಿಂದರಜೋಗಿ ಕವನವನ್ನು ನಾಟಕಕ್ಕೆ ರೂಪಾಂತರ ಮಾಡಿ ಮಕ್ಕಳೇ ನಟಿಸುತ್ತಿದ್ದಾರೆ. ಶಿವಮೊಗ್ಗ ಸಹ್ಯಾದ್ರಿ ರಂಗತರಂಗ ತಂಡ ಅರ್ಪಿಸಲಿರುವ ಈ ನಾಟಕವನ್ನು ಮಂಜುನಾಥ ಮತ್ತು ತೇಜಸ್ವಿನಿ ಅವರು ನಿರ್ದೇಶಿಸಿದ್ದಾರೆ.
Leave a comment