Home Agriculture ಕುಂಸಿ:’ರೇಚಿಕೊಪ್ಪದಲ್ಲಿ ಕೊಳವೆ ಬಾವಿ ಕೊರೆಯಲು ಅರಣ್ಯ ಇಲಾಖೆ ಅಡ್ಡಿ; ರೈತರ ಆಕ್ರೋಶ’
AgricultureHomeTaluk News

ಕುಂಸಿ:’ರೇಚಿಕೊಪ್ಪದಲ್ಲಿ ಕೊಳವೆ ಬಾವಿ ಕೊರೆಯಲು ಅರಣ್ಯ ಇಲಾಖೆ ಅಡ್ಡಿ; ರೈತರ ಆಕ್ರೋಶ’

Share
Share

ಶಿವಮೊಗ್ಗ:’ತಾಲ್ಲೂಕಿನ ಕುಂಸಿ ಸಮೀಪದ ರೇವಚಿಕೊಪ್ಪ (ರೇಚಿಕೊಪ್ಪ) ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಕೊಳವೆ ಬಾವಿ (ಬೋರ್‌ವೆಲ್) ಕೊರೆಯಲು ರೈತರು ಮುಂದಾದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸಿದ್ದು, ಇಲಾಖೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ರೈತರಾದ ಕೇಶವ ಹೊಸಕೊಪ್ಪ ಎಂಬುವವರು ತಮ್ಮ ಕೃಷಿ ಜಮೀನಿನಲ್ಲಿ ಸೋಮವಾರ ಕೊಳವೆ ಬಾವಿ ಕೊರೆಸುತ್ತಿದ್ದರು. ಆಗ ಆಯನೂರು ಉಪವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೊಳವೆ ಬಾವಿ ಕೊರೆಯದಂತೆ ತಡೆದಿದ್ದಾರೆ‌. ಇದರಿಂದಾಗಿ ರೈತರು ಇಲಾಖೆಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರೈತರು ಹಕ್ಕುಪತ್ರದೊಂದಿಗೆ ಜಮೀನಿನ ಖಾತೆ ಹೊಂದಿದ್ದರೂ ಕೊಳವೆ ಬಾವಿ ಕೊರೆಸಕೂಡದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಾಖೀತು ಮಾಡಿದ್ದಾರೆ. ರೈತರ ಮೇಲೆ ಈ ರೀತಿಯ ದಬ್ಬಾಳಿಕೆ ಸರಿಯಲ್ಲ‌. ಅರಣ್ಯ ಇಲಾಖೆ ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಇದೇ ರೀತಿಯ ಧೋರಣೆ ನಡೆಸುತ್ತಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ. ರೈತರನ್ನು ಶೋಚನೀಯವಾಗಿ ಕಾಣುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಹರತಾಳು ಹಾಲಪ್ಪ ಮತ್ತು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಭೇಟಿ ನೀಡಿ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ,’ಶರಾವತಿ ಮುಳುಗಡೆ ಸಂತ್ರಸ್ಥರೇ ಹೆಚ್ಚಿರುವ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ಕಿರಿ- ಕಿರಿ ನೀಡುತ್ತಿರುವುದು ಸರಿಯಲ್ಲ. ಬೇಸಿಗೆ ಆರಂಭವಾಗುತ್ತಿದೆ. ರೈತರು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕೊಳವೆ ಬಾವಿ ಮೊರೆ ಹೋಗುವುದು ಅನಿವಾರ್ಯ. ಆದ್ದರಿಂದ, ಅನಾವಶ್ಯಕ ರೈತರಿಗೆ ಸಮಸ್ಯೆ ಮಾಡುವುದು ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು.

ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ,’ರೈತರು ತಮ್ಮ ಜಮೀನಿನ ದಾಖಲೆಗಳನ್ನು ಹೊಂದಿದ್ದರೂ ಕೊಳವೆ ಬಾವಿ ಕೊರೆಸುವುದಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುವುದು ಸರಿಯಲ್ಲ. ಹೆಚ್ಚಿನ ರೈತರು ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ‌. ಇದಕ್ಕೆ ನೀರು ಒದಗಿಸುವುದು ಬೇಡವೆ? ಬೇಸಿಗೆ ಆರಂಭವಾಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ, ಕೊಳವೆ ಬಾವಿ ಕೊರೆಯುವುದಕ್ಕೆ ಅಡ್ಡಿ ಪಡಿಸುವುದು ಸರಿಯಾದ ನಿಲುವಲ್ಲ ಎಂದು ಎಚ್ಚರಿಸಿದರು.

‘ದಾಖಲೆಗಳಲ್ಲಿ ಗೊಂದಲ’

ರೇಚಿಕೊಪ್ಪ ಗ್ರಾಮದ ಸರ್ವೇ ನಂಬರ್ 201 ರಲ್ಲಿ ರೈತರು ಕೊಳವೆ ಬಾವಿ ಕೊರೆಸುತ್ತಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ದಾಖಲೆಯೊಂದಿಗೆ ಬಂದು ಈ ಜಾಗ ಅರಣ್ಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಕೊಳವೆ ಬಾವಿ ಕೊರೆಸಕೂಡದು ಎಂದು ಅಡ್ಡಿಪಡಿಸಿದ್ದರು. ಆದರೆ, ಆ ದಾಖಲೆಗಳ ಬಗ್ಗೆ ಅಧಿಕಾರಿಗಳಿಗೂ ಗೊಂದಲವಿದೆ. ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಖಲೆಗಳಲ್ಲಿ ಸಣ್ಣ-ಪುಟ್ಟ ವ್ಯತ್ಯಾಸವಾಗಿದೆ. ಆದ್ದರಿಂದ, ಕೊಳವೆ ಬಾವಿ ಕೊರೆಸಬಹುದು ಎಂದೂ ಕೂಡ ತಿಳಿಸಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಮಾಹಿತಿ ನೀಡಿದ್ದಾರೆ‌.

‘ಅರಣ್ಯಾಧಿಕಾರಿಗಳಿಗೆ ಮನವರಿಕೆ’

60-70 ವರ್ಷದಿಂದ ರೈತರು ಈ ಭಾಗದಲ್ಲಿ ವಾಸವಾಗಿದ್ದಾರೆ‌. ಇಲ್ಲಿ ರಸ್ತೆ, ವಿದ್ಯುತ್, ಸಾರಿಗೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ‘ಉಳುವವನೆ ಹೊಲದೊಡೆಯ’ ಎನ್ನುವುದು ಬಿಟ್ಟರೆ ರೈತರಿಗೆ ಬೇರೆ ವಿಚಾರಗಳ ಬಗ್ಗೆ ಅರಿವಿಲ್ಲ. ಈ ಭಾಗದ ರೈತರು ಇಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಸರ್ಕಾರದಿಂದ ಸಿಗಬೇಕಾದ ಆಧಾರ್ ಕಾರ್ಡ್ ಸೇರಿದಂತೆ ಮತದಾನ ಹಕ್ಕು, ಹೀಗೆ ಎಲ್ಲಾ ಸವಲತ್ತು ಕಲ್ಪಿಸಿದೆ‌. ಇದಕ್ಕಿಂತ ಹೆಚ್ಚಿನ ದಾಖಲೆ ಏನು ಬೇಕು? ಸರ್ಕಾರವೇ ಶರಾವತಿ ಮುಳುಗಡೆ ರೈತರನ್ನು ಲಾರಿಯಲ್ಲಿ ತಂದು ಬಿಟ್ಟಿದ್ದಾರೆ. ದಾಖಲೆಗಳು ಸುಪ್ರೀಂ ಕೋರ್ಟ್ ನಲ್ಲಿದ್ದು, ಪ್ರಸ್ತುತ ಇಲ್ಲಿ ಜೀವಿಸುತ್ತಿದ್ದೇವೆ. ಇದೇ ರೈತರ ದಾಖಲೆಗಳು. ಆದ್ದರಿಂದ, ಅರಣ್ಯ ಇಲಾಖೆ ಸೌಜನ್ಯದಿಂದ ನಡೆದುಕೊಳ್ಳಬೇಕು’ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಮನವರಿಕೆ ಮಾಡಿದರು.

📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ

shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.

📞 9113834502

ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?

✅ ಈಗಲೇ ವಾಟ್ಸಾಪ್ ಗುಂಪು ಸೇರಿ

'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

👍 Facebook ನಲ್ಲಿ ಫಾಲೋ ಮಾಡಿ
Share
Written by
Shivamogga herald

'ಮಾಧ್ಯಮಗಳು ಸುಳ್ಳು ಸುದ್ದಿ ನಿಪುಣತೆಯಲ್ಲಿ ಮುಂಚೂಣಿಯಲ್ಲಿವೆ.' ಪತ್ರಕರ್ತರು ಪೂರಕ ಮಾಹಿತಿಯನ್ನು ಸಂಪಾದಿಸದೆ, ಅರೆಬರೆ ಬೆಂದ ಸುದ್ದಿಯ ಮಾಹಿತಿಯನ್ನು ಸಮಾಜಕ್ಕೆ ಹಂಚುವ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸರಿಯಾದ ನಿಲುವಲ್ಲ'- ಹೀಗೊಂದು ಅಪವಾದ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ಮೇಲಿದೆ. ಆದ್ದರಿಂದ, ಇಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳಿಗೆ ಸ್ಥಾನ ನೀಡಲು ಇಚ್ಛಿಸುವುದಿಲ್ಲ. ಓದುಗರಿಗೆ ಸತ್ಯ ಹಾಗೂ ನಿಖರತೆಯ ಸುದ್ದಿಯೊಂದಿಗೆ ಸುದ್ದಿಯಾಗಿ ಮಾತ್ರ ಕೊಡಲು ಬಯಸುತ್ತೇವೆ. ಇದೊಂದು ಮೈಲಿ ಗಲ್ಲು ಸಮಾಜವನ್ನು ಎಚ್ಚರಿಸುವ ಹಾಗೂ ಸಮ ಸಮಾಜ ಕಟ್ಟುವ ಕಾರ್ಯಕ್ಕೆ ಅಡಿಪಾಯ ಆಗಲಿದೆ ಎನ್ನುವ ವಿಶ್ವಾಸದೊಂದಿಗೆ 'ಶಿವಮೊಗ್ಗ ಹೆರಾಲ್ಡ್' ಡಿಜಿಟಲ್ ಮಾಧ್ಯಮ ಕಟ್ಟಿದ್ದೇವೆ. ಸ್ಥಳೀಯ ಸುದ್ದಿಗಳಿಗೆ ನಮ್ಮ ಮೊದಲ ಆದ್ಯತೆ. ಮಾಹಿತಿ ಹಾಗೂ ಸಲಹೆಗೆ ದೂರವಾಣಿ/ ವಾಟ್ಸಾಪ್ ಸಂಖ್ಯೆ: 9113834502, 8197788460 ಸಂಪರ್ಕಿಸಬಹುದು.

Leave a comment

Leave a Reply

Your email address will not be published. Required fields are marked *