ಶಿವಮೊಗ್ಗ:’ಖಾಸಗಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮಾರ್ಗ ಮಧ್ಯೆಯೇ ಸಂಪೂರ್ಣ ಸುಟ್ಟು ಹೋದ ಘಟನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ.
ಹೊಸನಗರ ತಾಲ್ಲೂಕಿನ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಬಸ್ ಇದಾಗಿದ್ದು, ಬಸ್‌ನಲ್ಲಿ 40 ಮಂದಿ ಪ್ರಯಾಣಿಕರು ಇದ್ದರು.
ಬೆಂಗಳೂರಿನ ಅನ್ನಪೂರ್ಣ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಸ್ವೀಪರ್ ಬಸ್, ರಾತ್ರಿ ನಿಟ್ಟೂರಿನಿಂದ ಹೊರಟು ನಗರ, ಹೊಸನಗರ, ರಿಪ್ಪನ್ ಪೇಟೆ ಮೂಲಕ ಶಿವಮೊಗ್ಗದತ್ತ ಬರುವಾಗ ಅರಸಾಳು-ಸೂಡೂರು ಬಳಿಯ ಒಂಬತ್ತನೇ ಮೈಲಿಗಲ್ಲು ಕಾಡಿನ ಮಧ್ಯೆ ಬೆಂಕಿ ಕಾಣಿಸಿಕೊಂಡಿದೆ.
ಆರಂಭದಲ್ಲಿ ಬಸ್‌ನಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ನಂತರ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಹೀಗಾಗಿ ದೊಡ್ಡ ಅವಘಡ ತಪ್ಪಿದೆ ಎಂದು ತಿಳಿದುಬಂದಿದೆ.
ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾರಿಗೂ ಜೀವಪಾಯವಾಗಿಲ್ಲ.
ರಿಪ್ಪನ್ ಪೇಟೆ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಬಸ್‌ನಲ್ಲಿದ್ದವರಿಗೆ ನೆರವಾಗಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.
ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ: ಟಿ.ಡಿ.ತಿಮ್ಮಪ್ಪ
ಖಾಸಗಿ ಬಸ್ ಬೆಂಕಿ ಅವಘಡದಲ್ಲಿ ಗಾಯಗೊಂಡ 11 ಮಂದಿ ಪ್ರಯಾಣಿಕರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಬೆಂಕಿಯ ತೀರ್ವತೆಗೆ ಮೂವರಿಗೆ ಸುಟ್ಟ ಗಾಯಗಳಾಗಿವೆ. ಇಬ್ಬರಿಗೆ ತಲೆಗೆ ಪೆಟ್ಟಾಗಿದ್ದು, ಉಳಿದವರಿಗೆ ಸಣ್ಣ-ಪುಣ್ಣ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.- ಟಿ.ಡಿ.ತಿಮ್ಮಪ್ಪ, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಆಸ್ಪತ್ರೆ
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment