ಶಿವಮೊಗ್ಗ (ತುಮರಿ):’ಮೂಢನಂಬಿಕೆಗಳು ಸಮಾಜದ ಅಭಿವೃದ್ದಿಗೆ ಮಾರಕವಾಗಿದ್ದು, ಇವುಗಳಿಂದ ಹೊರಬರದ ಹೊರತು ಅಭಿವೃದ್ದಿ ಸಾಧ್ಯವಿಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಬುಧವಾರ ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾರ್ಥ ಸಾಧನೆಗೆ ಜನಸಮೂಹವನ್ನು ಬಳಸಿಕೊಳ್ಳುವ ಪಟ್ಟಭದ್ರರು ಹೆಣೆದಿರುವ ಮೂಢ ನಂಬಿಕೆಯೆಂಬ ಕುಟಿಲ ತಂತ್ರಗಳಿಂದ ಎಚ್ಚತ್ತೆಕೊಳ್ಳುವ ಅವಶ್ಯಕತೆ ಇದೆ. ಮಾನವರು ಭಕ್ತಿಯ ಪರಾಕಾಷ್ಠೆಯ ನಡುವೆ ಮೌಢ್ಯದತ್ತ ಸಾಗುವುದು ಸಲ್ಲದು ಎಂದರು.
ಸಿಗಂದೂರು ದೇವಸ್ಥಾನ ಎಲ್ಲರ ಒಳಗೊಳ್ಳುವಿಕೆ ಮೂಲಕ ಸರ್ವ ಧರ್ಮದ ಆರಾಧ್ಯ ಕೇಂದ್ರವಾಗಿ, ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸ ತಂದಿದೆ ಎಂದರು.
ಸಿಗಂದೂರು ಧರ್ಮದರ್ಶಿ ಎಸ್. ರಾಮಪ್ಪ ಮಾತನಾಡಿ,’ಶ್ರೀ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಳವನ್ನು ಅರಿತು ಸರ್ಕಾರ ಸೇತುವೆ ನಿರ್ಮಾಣ ಮಾಡಿದೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಸಿಗಂದೂರು ಕ್ಷೇತ್ರವೇ ಈ ಭಾಗದ ಜನರ ಚೈತನ್ಯ ಎಂದು ಹೇಳಿದರು.
ವೇದಿಕೆಯಲ್ಲಿ ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಚಂದ್ರಮೂರ್ತಿ ಹೆಸಿಗೆ, ಕಲಸೆ ಚಂದ್ರಪ್ಪ, ಹೊಳೆಯಪ್ಪ, ಅನಿತಾ ಕುಮಾರಿ, ದೇವಸ್ಥಾನದ ಕಾರ್ಯದರ್ಶಿ ಎಚ್.ಆರ್. ರವಿ ಕುಮಾರ್ ಸ್ವಾಗತಿಸಿದರು.
ಸಂಕ್ರಾಂತಿ ಹಬ್ಬ ಸಮೃದ್ಧಿ ತರಲಿ:ಯೋಗೇಂದ್ರ ಸ್ವಾಮೀಜಿ
ನಾಡಿನ ಭಕ್ತರ ಆರಾಧ್ಯ ದೇವತೆ ಸಿಗಂದೂರು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಬುಧವಾರ ವಿದ್ಯುಕ್ತವಾಗಿ ಆರಂಭಗೊಂಡಿತು. ಶರಾವತಿ ಹಿನ್ನೀರಿನಲ್ಲಿ ಮುಳುಗಿರುವ ಸೀಗೇ ಕಣಿವೆಯಲ್ಲಿ ನವಚಂಡಿಕಾ ಹವನ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದವು.
ಮೂಲ ಸ್ಥಾನ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿ ಬೆಳಗಿಸುವ ಸಾಂಪ್ರದಾಯಿಕ ಆಚರಣೆಯ ಮೂಲಕ ಸಿಗಂದೂರು ದೇವಿ ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.
ಜಾತ್ರೆಯ ಅಂಗವಾಗಿ ಸೀಗೇ ಕಣಿವೆಯಲ್ಲಿ ಪ್ರಾತಕಾಲದಿಂದಲೇ ನವಚಂಡಿಕಾ ಹವನ, ಚಂಡಿಕಾ ಹವನ ಆನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಸಾರಗನ ಜಡ್ಡು ಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೇರವೇರಿದವು.
ನಂತರ ಅಶೀರ್ವಚನ ನೀಡಿದ ಅವರು, ಸಂಕ್ರಾಂತಿ ಹಬ್ಬವು ಎಲ್ಲ ಸಮುದಾಯದವರಿಗೆ ಸಮೃದ್ಧಿಯನ್ನು ತರಲಿ ಎಂದು ಸಾರಗನ ಜಡ್ಡು ಯೋಗೇಂದ್ರ ಸ್ವಾಮೀಜಿ ಶುಭ ಹಾರೈಸಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment