ಶಿವಮೊಗ್ಗ: ಸರ್ಕಾರಿ ನೌಕರರಾದ ನಾವುಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾರ್ವಜನಿಕರ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘ, ವಾಹನ ಚಾಲಕರ ಸಂಘ ಹಾಗೂ ಡಿ.ಗ್ರೂಪ್ ನೌಕರರ ಸಂಘದ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಇಡೀ ದಿನ ಆಗುವ ಕೆಲಸವನ್ನು ಒಂದೇ ಗಂಟೆಯಲ್ಲಿ ಮಾಡಿ ಮುಗಿಸುವಂತಹ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿಯೊಬ್ಬ ನೌಕರನೂ ಆಧುನಿಕ ತಂತ್ರಜ್ಞಾನದ ಜ್ಞಾನವನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಕೆಲಸದಲ್ಲಿ ವೇಗ ಪಡೆಯಬಹುದು ಎಂದರು.
ಸರ್ಕಾರಿ ನೌಕರರಿಗೆ ನಮ್ಮ ಸಂಘಟನೆ ಸರ್ಕಾರದೊಂದಿಗೆ ಮಾತುಕತೆ ಮೂಲಕವೇ 7ನೇ ವೇತನ, ಆರೋಗ್ಯ ಸಂಜೀವಿನಿ ಸೇರಿದಂತೆ ಅನೇಕ ಸವಲತ್ತುಗಳನ್ನು ಕೊಡಿಸಿದೆ. ಎನ್ಪಿಎಸ್ನ್ನು ರದ್ದುಪಡಿಸಿ ಒಪಿಎಸ್ನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆದಿದೆ. ಇವೆಲ್ಲದಕ್ಕೂ ಕಾರಣ ಸಂಘಟನೆ ಎಂದರು.
ಪ್ರಮುಖರಾದ ಬೋಧಕೇತರ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ನವೀನ್, ಉಪಾಧ್ಯಕ್ಷ ದೇವರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಮೋಹನ್ ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿದ್ದಬಸಪ್ಪ, ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್ ಇದ್ದರು.
ಜನ ಸಾಮಾನ್ಯರಿಗೆ ತ್ವರಿತ ಸೇವೆ ಒದಗಿಸಿ
ಆರ್ಟಿಫಿಶಿಯಲ್ ಇಂಟಲಿಜೆನ್ಸಿ (ಎಐ) ಈಗ ಎಲ್ಲ ಕಡೆ ಬಳಸಿಕೊಳ್ಳಲಾಗುತ್ತಿದೆ. ಇದು ಇಲಾಖಾ ವ್ಯಾಪ್ತಿಗೆ ಬಂದರೆ ಸರ್ಕಾರಕ್ಕೆ ನೌಕರರ ಅವಶ್ಯಕತೆಯೇ ಬರುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ನೌಕರರ ಸಮೂಹ ಜನಸಾಮಾನ್ಯರನ್ನು ಕಚೇರಿಗೆ ಅಲೆಸದೇ ಕೆಲಸವನ್ನು ಮಾಡಿಕೊಡಬೇಕು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment