ಸೈನಿಕ ಹುಳು ನಿರ್ವಹಣೆಗೆ ಸಮಗ್ರ ಬಹು ವಾರ್ಷಿಕ ಯೋಜನೆ ಅಳವಡಿಸಿಕೊಳ್ಳಿ: ಡಾ.ಬಿ.ಎಂ.ಪ್ರಸನ್ನ
ಶಿವಮೊಗ್ಗ:’ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ಧತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸಿಟ್ಯೂಟ್ ಆಫ್ ಸೌತ್ ಏಷಿಯಾದ ವ್ಯವಸ್ಥಾಪಕ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸೈನಿಕ ಹುಳುವಿನ ಸುಸ್ಥಿರ ನಿಯಂತ್ರಣ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸೈನಿಕ ಹುಳು ಮೊದಲಿಗೆ ಅಮೇರಿಕಾದಲ್ಲಿ ಕಂಡು ಬಂದಿತು. ನಂತರ 2016 ರಲ್ಲಿ ಆಫ್ರೀಕಾದಲ್ಲಿ ಹೆಚ್ಚಿನ ಬಾಧೆ ನೀಡಿತು. ಕಳೆದ 6-7 ವಷಗಳಿಂದ ನಮ್ಮ ದೇಶದಲ್ಲಿ ತೊಂದರೆ ನೀಡುತ್ತಿದೆ. ಸೈನಿಕ ಹುಳು ಬಾಧೆ ನಿಯಂತ್ರಣಕ್ಕೆ ಬಳಸಲಾಗುತ್ತಿರುವ ರಾಸಾಯನಿಕ ಕೀಟನಾಶಕಗಳಿಂದ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತಿದೆ. ಆದ್ದರಿಂದ ಸಮಗ್ರ ಕೀಟ ನಿರ್ವಹಣೆ ಪದ್ದತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕೀಟ ಬಾಧೆ ಹತೋಟಿಗೆ ಸಮಗ್ರ ಕೀಟ ನಿರ್ವಹಣೆ ಹಾಗೂ ಬಹು ವಾರ್ಷಿಕ ಯೋಜನೆಗಳನ್ನು ರೂಪಿಸಲು ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವ ಬಹಳ ಮುಖ್ಯವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದರು.
ಬೆಂಗಳೂರಿನ ಐಸಿಎಆರ್-ಎನ್ಬಿಎಐಆರ್ ನ ನಿರ್ದೇಶಕ ಡಾ.ಎಸ್.ಎನ್ ಸುನಿಲ್ ಮಾತನಾಡಿ, ಸೈನಿಕ ಹುಳು ಸೇರಿದಂತೆ ಕೀಟಗಳನ್ನು ನಿರ್ವಹಿಸಲು ಪರಿಸರ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಆದರೆ, ನಾವು ಅದಕ್ಕೆ ಅವಕಾಶ ನೀಡದೇ ಅನವಶ್ಯಕವಾಗಿ ಹಲವಾರು ರಾಸಾಯನಿಕ ಕೀಟನಾಶಕಗಳನ್ನು ಸಂಪಡಿಸುತ್ತಲೇ ಇದ್ದೇವೆ. ಇದರಿಂದ ಸ್ವಾಭಾವಿಕ ಪರಿಸರ ವ್ಯವಸ್ಥೆ ಹಾಳಾಗುತ್ತಿದೆ ಎಂದರು.
ಪರಿಸರ ವ್ಯವಸ್ಥೆಯನ್ನು ಕಾಪಾಡುವುದು ಅತಿ ಅವಶ್ಯಕವಾಗಿದ್ದು, ಜೈವಿಕ ಸರಪಳಿಯನ್ನು ಬೆಳೆಯಲು ಬಿಡಬೇಕು. ಬೆಳೆಗಳನ್ನು ಯಾವುದೇ ರಾಸಾಯನಿಕ ಕೀಟ ನಾಶಕಗಳನ್ನು ಹಾಕದೇ ಬೆಳೆಯಬಹುದು. ಪರಿಸರ ಕೀಟ ನಿಯಂತ್ರಣಕ್ಕೆ ತನ್ನದೇ ಆದ ವ್ಯವಸ್ಥೆ ಹೊಂದಿದ್ದು, ಆ ಪ್ರಕ್ರಿಯೆಗೆ ಅವಕಾಶ ನೀಡಬೇಕು. ರೈತರು ಅನವಶ್ಯಕವಾಗಿ ಆತಂಕಕ್ಕೀಡಾಗಿ ರಾಸಾಯನಿಕ ಕೀಟನಾಶಕಗಳ ಬಳಕೆ ಮಾಡುವುದಕ್ಕೆ ಮುಂದಾಗುತ್ತಾರೆ.
ರಾಸಾಯನಿಕ ಕೀಟನಾಶಕಗಳನ್ನು ಬಳಸದೇ ಕೀಟ ನಿಯಂತ್ರಿಸಲು ಹಲವಾರು ವಿಧಾನಗಳಿವೆ. ಜೈವಿಕ ನಿಯಂತ್ರಣ ವಿಧಾನಗಳು, ಜೈವಿಕ ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಸಮಗ್ರವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ಕೀಟ ಬಾಧೆಯನ್ನು ಹತೋಟಿಗೆ ತರಬೇಕು ಎಂದರು.
ವಿಶ್ವದಲ್ಲಿ ವಿವಿಧ ದೇಶಗಳು ಕೃಷಿ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಸಾಕಷ್ಟು ಖರ್ಚು ಮಾಡುತ್ತಿದೆ. ಚೀನಾ ದೇಶ ತನ್ನ ಜಿಡಿಪಿಯ ಶೇ.2.1 ರಷ್ಟು, ಇಸ್ರೇಲ್ ದೇಶ ಶೇ. 3.4, ಅಮೇರಿಕಾ 6.8, ಸೌತ್ ಕೊರಿಯಾ ಶೇ.4.6 ರಷ್ಟು ಮಾಡಿದರೆ, ಭಾರತ ಭಾರತ ಶೇ.6 ಮಾಡಿರುತ್ತದೆ ಎಂದು ಮಾಹಿತಿ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕುಲಪತಿ ಡಾ.ಆರ್.ಸಿ ಜಗದೀಶ್ ಮಾತನಾಡಿ,’ಮೆಕ್ಕೆಜೋಳ, ಭತ್ತ, ಅಡಿಕೆ ಮತ್ತು ಶುಂಠಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮುಖ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಕಾಡುವ ಸೈನಿಕ ಹುಳು ನಿಯಂತ್ರಣ ಮಾಡಲು 2018 ರಿಂದ ವಿಶ್ವವಿದ್ಯಾಯಲವು ಹಲವಾರು ಪ್ರಯೋಗಗಳನ್ನು ಮಾಡಿದ್ದು, ಹುಳು ಬಾಧೆ ಕಡಿಮೆ ಆಗುತ್ತಿದೆ. ಈ ಕುರಿತು ಅತ್ಯುತ್ತಮ ಜರ್ನಲ್ಗಳನ್ನು ಪ್ರಕಟಿಸಲಾಗಿದ್ದು, ಇತ್ತೀಚಿನ ಸಂಶೋಧನೆಗಳು ಸೈನಿಕ ಹುಳು ನಿಯಂತ್ರಣಕ್ಕೆ ಸಹಕಾರಿಯಾಗಲಿವೆ ಎಂಬ ಭರವಸೆ ಇದೆ. ಸೈನಿಕ ಹುಳು ಸೇರಿದಂತೆ ಕೀಟಗಳ ನಿಯಂತ್ರಣದಲ್ಲಿ ಸರ್ಕಾರಿ ಸಂಸ್ಥೆಗಳು ಮಾತ್ರವಲ್ಲ ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳು, ಅಂತರಾಷ್ಟ್ರೀಯ ಸಂಸ್ಥೆಗಳ ಸಹಯೋಗ ಬೇಕು ಎಂದ ಅವರು, ಪರಿಸರ ವ್ಯವಸ್ಥೆ ಹಾಳಾಗದಂತೆ ಕೀಟ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೀಟಶಾಸ್ತ್ರಜ್ಞರಿಗೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈನಿಕ ಹುಳು ನಿಯಂತ್ರಣ ಕುರಿತಾದ ಕೈಪಿಡಿಯನ್ನು ಬಿಡುಗೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ನಿರ್ದೇಶಕ ಡಾ.ಬಿ.ಹೇಮ್ಲಾನಾಯ್ಕ್ ಮಾತನಾಡಿದರು.
ಪ್ರಗತಿಪರ ರೈತರುಗಳಾದ ಹೆಚ್.ಡಿ.ದೇವಿಕುಮಾರ್, ಹೆಚ್.ಎಸ್.ಶಶಾಂಕ್,ಕಾಲೇಜಿನ ಬೋಧಕ, ಬೋಧಕೇರ ಸಿಬ್ಬಂದಿ, ವಿವಿಧ ರಾಜ್ಯ, ದೇಶಗಳ ಪ್ರತಿನಿಧಿಗಳು, ಸಂಘಟನಾ ಕಾರ್ಯದರ್ಶಿ ದೇಶ್ಮುಖ್ ಭಾಗವಹಿಸಿದ್ದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment