ಶಿವಮೊಗ್ಗ: ಜೀವನದಲ್ಲಿ ಯಾವುದೇ ರೀತಿಯ ಸಂಶಯ, ಸಂದೇಹಗಳು ಎದುರಾದಲ್ಲಿ ನಮ್ಮ ಸಂವಿಧಾನ ಓದಿದರೆ ಉತ್ತರ ಸಿಗುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಯಿಂದ ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರನ್ನೂ ಸಮಾನತೆಯಿಂದ ಕಾಣಲು, ಎಲ್ಲ ರೀತಿಯ ನ್ಯಾಯ ಒದಗಿಸಲು ಮಾರ್ಗಸೂಚಿಯಾಗಿರುವ ನಮ್ಮ ಸಂವಿಧಾನವನ್ನು ಮಕ್ಕಳು ಸೇರಿದಂತೆ ಎಲ್ಲರೂ ಓದಿ, ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನಕ್ಕೆ ಸಾಕಷ್ಟು ಆಯಾಮಗಳಿದ್ದು, ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಇದರ ಮಹತ್ವ ತಿಳಿಯಲು ಸಾಕಷ್ಟು ಚಿಂತನೆ ನಡೆಸಬೇಕು. ನಾನು ಐಎಎಸ್ ಮಾಡುವಾಗ ಪ್ರತಿ ಸಲ ಸಂವಿಧಾನ ಓದಿದಾಗಲೂ ಹೊಸ ಹೊಸ ಅರ್ಥ ಮತ್ತು ಪ್ರೇರಣೆ ಲಭಿಸುತ್ತಿತ್ತು. ನಮ್ಮ ಮಕ್ಕಳು ಸಂವಿಧಾನದ ಮೂಲಭೂತ ಉದ್ದೇಶ, ಇದು ನೀಡಿರುವ ಹಕ್ಕುಗಳು, ಬಾಧ್ಯತೆಗಳನ್ನು ತಿಳಿದುಕೊಳ್ಳಬೇಕು. ಅಧಿಕಾರಿಗಳಾದ ನಮಗೆ ಎಲ್ಲರನ್ನೂ ಸಮಾನತೆಯಿಂದ ಕಾಣುವ, ಎಲ್ಲ ರೀತಿಯ ನ್ಯಾಯ ಒದಗಿಸಲು ಕಲಿಸಿಕೊಟ್ಟ ಸಂವಿಧಾನದ ಮಾರ್ಗದಲ್ಲಿ ನಡೆಯುವ ಮೂಲಕ ಮಾದರಿಯಾಗಬೇಕು ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಡಾ.ಎಂ. ಬಸವರಾಜಪ್ಪ ಮಾತನಾಡಿ,’1930 ರ ನ.26 ರಂದು ದೇಶ ಪೂರ್ಣ ಸ್ವರಾಜ್ಯ ಘೋಷಿಸಿದ್ದು, ಇದರ ಸ್ಮರಣಾರ್ಥ 1949 ರ ನ.26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.
<span;> ಸಮಾಜದ ಸ್ವಾಸ್ಥ್ಯ ಕಾಪಾಡಲು ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಾರಿಗೊಳಿಸಿದೆ. ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಡಾ. ಬಿ.ಆರ್. ಅಂಬೇಡ್ಕರ್ರವರನ್ನು ಅರ್ಥ ಮಾಡಿಕೊಂಡಂತೆ. ಪ್ರತಿ ಮನೆಗಳಲ್ಲಿ ಸಂವಿಧಾನ ಪುಸ್ತಕ ಇರಬೇಕು. ಮೂಲ ಸಂವಿಧಾನದ ಆಶಯಗಳನ್ನು ನಾವು ಬದುಕಬೇಕು ಎಂದರು.
ಬಹಳ ಜನರ ಪರಿಶ್ರಮದಿಂದ ಸಂವಿಧಾನ ಕರಡು ರಚನೆಯಾಗಿದ್ದು, ಇದರ ಆತ್ಮ ಮಾತ್ರ ಅಂಬೇಡ್ಕರ್ ಆಗಿದ್ದಾರೆ. ಕೇವಲ ರಾಜಕೀಯ ಮಾತ್ರವಲ್ಲ, ಸಾಮಾಜಿಕ ,ಆರ್ಥಿಕ ಸ್ವಾತಂತ್ರ್ಯ ಬರಬೇಕು ಎಂಬುದು ಅವರ ಸದಾಶಯವಾಗಿತ್ತು ಎಂದ ಅವರು, ಸಂವಿಧಾನ ಪೀಠಿಕೆಯ ಪ್ರತಿಯೊಂದು ಪದಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ರವರು ಪ್ರಪಂಚದ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ್ದರು. ನಮ್ಮ ನಾಗರೀಕತೆ, ಬುಡಕಟ್ಟು ಕುಲಚಿನ್ಹೆಗಳನ್ನು ಸಂವಿಧಾನದ ಮುಖಪುಟದಲ್ಲಿ ಬಳಸಿದ್ದಾರೆ. ಸಂವಿಧಾನದ ಮೂಲಪ್ರತಿ ಹಸ್ತಾಕ್ಷರದಲ್ಲಿದ್ದು, ದೇಶದಲ್ಲಿ ಇದರ 3 ಮೂಲಪ್ರತಿಗಳಿವೆ ಎಂದರು.
ಭಾರತ ಸಂವಿಧಾನದಲ್ಲಿ 22 ಭಾಗಗಳು, 395 ವಿಧಿಗಳು, 12 ವೇಳಾಪಟ್ಟಿಯಿದ್ದು,ಇದನ್ನು ರಚಿಸಲು 2 ವರ್ಷ 11 ತಿಂಗಳು, 18 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಪಂಚದ ಅತಿ ದೊಡ್ಡ ಸಂವಿಧಾನ ಇದಾಗಿದ್ದು, ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತೀಯತೆಗೆ ಸರಿಹೊಂದುವಂತೆ ರಚಿಸಲಾಗಿದೆ ಎಂದ ಅವರು, ಸಂವಿಧಾನವನ್ನು ಅಲಂಕರಿಸಿದ ಕನ್ನಡಿಗರು, ಕರಡು ಸಮಿತಿಯಲ್ಲಿ ಇದ್ದ ಕನ್ನಡಿಗರು, ಹಾಗೂ ಸಂವಿಧಾನ ವಿನ್ಯಾಸದಲ್ಲಿ ಅಳವಡಿಸಲಾಗಿರುವ ಪೌರಾಣಿಕ, ಐತಿಹಾಸಿಕ, ಭೌಗೋಳಿಕ, ಧಾರ್ಮಿಕ ದೃಶ್ಯಗಳನ್ನು ದೃಶ್ಯೀಕರಿಸುವ ಚಿತ್ರಗಳ ಕುರಿತು ಪಿಪಿಟಿ ಮೂಲಕ ವಿಶೇಷ ಮಾಹಿತಿ ನೀಡಿದರು.
ಸಂವಿಧಾನದ ಭಾಗಗಳಲ್ಲಿ ಸಿಂಧೂ ಕಣಿವೆ ನಾಗರೀಕ ಮುದ್ರೆ, ಗುರುಕುಲದ ದೃಶ್ಯ, ರಾಮಾಯಣದ ಒಂದು ದೃಶ್ಯ, ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಹೇಳುವಾಗ ಭಗವದ್ಗೀತೆಯ ಕೃಷ್ಣಾರ್ಜುನರ ದೃಶ್ಯ, ಬುದ್ದನ ಪ್ರಥಮ ಉಪದೇಶದ ಚಿತ್ರ, ಮಹಾವೀರನ ಅಹಿಂಸಾ ತತ್ವ ದೃಶ್ಯ, ಬೌದ್ಧ ಸನ್ಯಾಸಿಗಳೊಂದಿಗೆ ಅಶೋಕನ ಚಿತ್ರ, ಗಂಧರ್ವರ ದೃಶ್ಯ, ರಾಜ ವಿಕ್ರಮಾದಿತ್ಯ, ನಳಂದ ವಿಶ್ವವಿದ್ಯಾಲಯ, ನಟರಾಜನ ವಿಗ್ರಹ, ಮೊಗಲ್ ಆಸ್ಥಾನದ ವಾಸ್ತುಶಿಲ್ಪ, ಶಿವಾಜಿ, ಗುರುಗೋವಿಂದ್, ಲಕ್ಷ್ಮಿ ಬಾಯಿ, ಟಿಪ್ಪು ಸುಲ್ತಾನ್, ಗಾಂಧೀಜಿ ದಂಡಿ ಸತ್ಯಾಗ್ರಹ, ಹೀಗೆ ವಿವಿಧ ಐತಿಹಾಸಿಕ, ಭೌಗೋಳಿಕತೆಯ ಚಿತ್ರಗಳನ್ನು ಬಳಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಎನ್. ಹೇಮಂತ್, ಡಿವೈಎಸ್ಪಿ ಬಾಬು ಅಂಜನಪ್ಪ, ಶಿವಮೊಗ್ಗ ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.
ಸಂವಿಧಾನದಿಂದ ಶಾಂತಿ, ಸಾಮರಸ್ಯ, ಸಹಬಾಳ್ವೆ,: ಮಾಯಣ್ಣಗೌಡ
ವೈವಿಧ್ಯಮಯವಾದ ದೇಶದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಬ್ರಾತೃತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್ರವರು ನಮಗೆ ನೀಡಿದ್ದು, ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ನೀಡಿ ಪ್ರಪಂಚದ ಅತ್ಯಂತ ದೊಡ್ಡ ಮತ್ತು ಸಂಪೂರ್ಣವಾದ ಸಂವಿಧಾನ ನೀಡಿದ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿದ ದಿನ ಇದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಕೆ.ಮಾಯಣ್ಣಗೌಡ ಸ್ಮರಿಸಿದರು.
📢 ನಿಮ್ಮೂರ ಸುದ್ದಿಗಳನ್ನು ಇಮೇಲ್ ಮಾಡಿ
shivamoggaherald@gmail.com ಅಥವಾ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಕೊಡಿ.
ನೀವು ಇನ್ನೂ 'ಶಿವಮೊಗ್ಗ ಹೆರಾಲ್ಡ್' ವಾಟ್ಸಾಪ್ ಗುಂಪು ಸೇರಿಲ್ವ?
✅ ಈಗಲೇ ವಾಟ್ಸಾಪ್ ಗುಂಪು ಸೇರಿ'Facebook' ನಲ್ಲಿ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
👍 Facebook ನಲ್ಲಿ ಫಾಲೋ ಮಾಡಿ
Leave a comment